ಕಾಯುವ ತಾಳ್ಮೆ ನನ್ನಲ್ಲಿತ್ತು, ಪ್ರೀತಿಸುವ ಹೃದಯ ಅವನಿಗಿರಲಿಲ್ಲ: ನನ್ನ ಪ್ರೀತಿಯ ಸಾಲುಗಳು.
ಬದುಕ ಪ್ರಯಾಣದಲ್ಲಿ ತುಂಬಾ ಒಂಟಿಯಾಗಿಬಿಟ್ಟೆ ಅನ್ನಿಸುತಿತ್ತು, ಒಮ್ಮೆ ಅಳು, ಮತ್ತೊಮ್ಮೆ ನಗು, ಮಗದೊಮ್ಮೆ ಕೋಪ ಹೀಗೆ ಎಲ್ಲಾ ಭಾವನೆಗಳಿಗೆ ಜೀವ ತುಂಬುವ ಉಸಿರಿಗೆ ಉಸಿರೊಂದು ಕಾಯುತ್ತಿತ್ತು. ಎಂದೂ ನಾ ಬಯಸಿರಲಿಲ್ಲ ಅವನೊಬ್ಬ ಸುಂದರನಾಗಿರಬೇಕು, ಧನವಂತನಾಗಿರಬೇಕು ಅಥವಾ ಸಿರಿವಂತನಾಗಿರಬೇಕೆಂದು. ಅವನ
ಮನದ ಉದ್ಯಾನವನದಲ್ಲಿ ದಿನಾಲು ಅರಳುವ ನೂರು ಹೂವುಗಳಲ್ಲಿ ಒಂದು ಹೂವಾದರೂ ನಾನಾಗಿರಬೇಕಿತ್ತು, ಅಷ್ಟೇ ಸಾಕಿತ್ತು ನನಗೆ. ನೋವಾದಾಗ ಒಮ್ಮೆ ಅವನ ಮಡಿಲು, ನಗು ಬಂದಾಗ ಜೊತೆಗೊಂದು ನಗು, ಕೋಪ ಬಂದಾಗ ಸಣ್ಣ ಸಮಧಾನ ಇವಿಷ್ಟೇ ನಾ ಅವನಿಂದ ಬಯಸಿದ್ದು...
ಉತ್ತರ ಧ್ರುವ ಎಂದಿಗೂ ದಕ್ಷಿಣ ಧ್ರುವದಿಂದ ಆಕರ್ಷಿತವಾಗುತ್ತಂತೆ. ಅವನೂ ಹಾಗೇ ನನ್ನ ತದ್ವಿರುದ್ಧ. ನನ್ನ ಯಾವುದೇ ಭಾವನೆಗಳಿಗೆ ಆತನ ಮನದಲ್ಲಿ ಸಣ್ಣ ಸಮಧಾನವೂ ಇರಲಿಲ್ಲ. ನನಗೆ ಪ್ರೀತಿ ಅಂದರೆ ಪರಪಂಚ ಆದರೆ ಆತನಿಗೆ ಪ್ರೀತಿ ಅಂದರೆ ಹಳೆಯದಾದಂತೆಲ್ಲಾ ಎಸೆಯುವ ಬಟ್ಟೆಯಾಗಿತ್ತು. ಅದೂ ಇದೂ ಅಂತ ನನ್ನದೇ ನೂರು ಕನಸುಗಳನ್ನು ಕಟ್ಟಿ ಹೊಸ ಜಗತ್ತನ್ನು ಸೃಷ್ಟಿಸಲು ಹೊರಟ ಜೀವ ನಾನದರೆ. ಅವನು ಇವನ್ನೆಲ್ಲಾ ಕಿರಿಕಿರಿಯೆಂಬಂತೆ ಕಾಣುತಿದ್ದ ಕಲ್ಲು ಬಂಡೆ. ಅವನಿಗಾಗಿ ನೂರು ಜನುಮ ಕಾಯುವ ತಾಳ್ಮೆ ನನ್ನಲ್ಲಿತ್ತು, ಆದರೆ ಮುಖ್ಯವಾಗಿ ಪ್ರೀತಿಸುವ ಹೃದಯವೇ ಅವನಿಗಿರಲಿಲ್ಲ. ನನ್ನ ಮಾತು, ನನ್ನ ಕನಸು, ನನ್ನ ಆಸೆ ಎಲ್ಲವೂ ಆತನಿಗೆ ಬರಿಯ ಒಂದು ಕ್ಷಣಮಾತ್ರ ಕೇಳಿ ತಲೆನೋವು ಬರಿಸಿಕೊಳ್ಳುವ ಬೇಡದ ವಿಷಯವಷ್ಟೇ....
ಅವನಿಗಾಗಿ ನಾನು ಎಲ್ಲವನ್ನೂ ಸಹಿಸಲು ತಯಾರಿದ್ದೆ, ಅವನಿಗಾಗಿ ನನ್ನ ಜೀವವನ್ನು ಅರ್ಪಿಸಲು ಕೂಡಾ.. ಆದರೆ ಅವನಿಗೆ ನಾನೆಂದೂ ಗೆಳತಿಯಾಗಿ ಕಾಣಲೇ ಇಲ್ಲ.. ಅವನು ನನ್ನ ಬದುಕಲ್ಲಿ ನನ್ನ ಕನಸಾದರೆ,
ನಾನು ಅವನ ಬದುಕಲ್ಲಿ ಒಂದು ಕೆಟ್ಟ ಕನಸಾದೆ...
ಅವನು ನನ್ನ ಭಾರವನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗಬೇಕೆಂದು ನಾ ಬಯಸಲೇ ಇಲ್ಲ,
ಅವನು ನನ್ನ ಕಣ್ಣಲ್ಲಿ ಜಾರುವ ಹನಿಯನ್ನು ಒರೆಸುವ ಕೈಯಾಗಿದ್ದರೆ ಸಾಕಿತ್ತು.
ಆದರೆ ಅವನು ಯಾವುದನ್ನೂ ಮಾಡಲಿಲ್ಲ..
ಕೊನೇ ಪಕ್ಷ ಅವನ ಮೋಸದ ಅರಿವೂ ನನಗಾಗಲಿಲ್ಲ...
ಅವನಾಡಿದ ನಾಟಕದ ಅರಿವು ಕೂಡಾ..
ಅವನಾಡುತಿದ್ದ ಪ್ರತೀ ಮಾತಿನಲ್ಲಿ ಕೋಟಿ ಸುಳ್ಳಿತ್ತು ಎಂದು ಅರಿಯುವಷ್ಟರಲ್ಲಿ ನಾನು ಸಂಪೂರ್ಣವಾಗಿ ಅವನನ್ನು ನಂಬಿಬಿಟ್ಟಿದ್ದೆ.
ಹಿಂದುರುಗಲೂ ಆಗಲಿಲ್ಲ,
ಮುಂದುವರಿಯಲೂ ಆಗಲಿಲ್ಲ,
ಕೊನೇ ಪಕ್ಷ ಅವನನ್ನೂ ಮರೆಯಲೂ ಆಗಲಿಲ್ಲ,
ಎಲ್ಲೋ ತೋಟದ ಮೂಲೆಯಲ್ಲಿ ಎಂದಾದರೊಮ್ಮೆ ಇಳಿಸಂಜೆಯ ಹೊತ್ತಿನಲ್ಲಿ ಸುತ್ತಾಡಲು ಹೋದಾಗ ಘಮ್ಮೆಂದು ಅರಳುವ ಮಲ್ಲಿಗೆಯು ಮತ್ತೆ ಅವನದೇ ನೆನಪು ತಂದೊಡ್ಡಿ ಮನಸಿಗೆ ನೋವು ನೀಡುತ್ತದೆ....
ತೊರೆದು ಹೋಗುವಂತಿದ್ದರೆ ಎಂದೋ ಹೋಗಿಬಿಡಬಹುದಿತ್ತು,
ಆದರೆ ನನ್ನ ಕೈಯಲ್ಲಿ ಅದು ಆಗಲೇ ಇಲ್ಲ..
ಇಂದಿಗೂ ನೆನಪಾಗುತ್ತಾನೆ,
ಅಳುವಿಗೆ ನೆಪವಾಗುತ್ತಾನೆ,
ಭಯಾನಕ ಕನಸಾಗುತ್ತಾನೆ,
ಆದರೆ ಎಲ್ಲವನ್ನೂ ಸಹಿಸಿಕೊಂಡು ಜಗದ ಕಣ್ಣೆದುರಲ್ಲಿ ನಾ ನಗುತಿದ್ದೇನೆ.
ಭಯದಿಂದಲ್ಲ, ನಗಲೇಬೇಕೆಂಬ ಅನಿವಾರ್ಯತೆಯಿಂದ...
ಯಶು ಬೆಳ್ತಂಗಡಿ.

