ಕನಸ ಕೋಟೆಗೆ ಅಡಿಪಾಯ ಹಾಕಿ ಬದುಕು ಕಟ್ಟಿಕೊಟ್ಟ ಗುರು ಸ್ಮಿತೇಶ್ ಎಸ್ ಬಾರ್ಯ.
ಜಗತ್ತಿನಲ್ಲಿ ಯಾವುದೋ ಒಂದು ಕಾರಣಕ್ಕೆ ಯಾರೋ ವ್ಯಕ್ತಿ ಪರಿಚಯವಾಗುತ್ತಾರಂತೆ. ಅದು ನಿಜ ಅಂತ ಜೀವನದಲ್ಲಿ ಅನ್ನಿಸಿದ್ದು, ಒಬ್ಬ ಜಗತ್ತಿನ ಅದ್ಭುತ ಗುರುವನ್ನು ನಾ ಪಡೆದಾಗ. ನೂರು ಸಮಸ್ಯೆಗಳ ನಡುವೆ, ಸಾವಿರ ಬಿಕ್ಕಟ್ಟಿನ ನಡುವೆ, ಹಲವಾರು ನೋವಿನ ನಡುವೆ, ದಿಕ್ಕು ತಪ್ಪಿ ಎತ್ತಲೋ ಹೋಗಿ ಬೀಳುತಿದ್ದ ಜೀವಕ್ಕೆ, ಜೀವನಕ್ಕೆ ಹೊಸ ಕನಸಿನ ಅಡಿಪಾಯ ಹಾಕಿ ಬದುಕ ಕಟ್ಟಿಕೊಳ್ಳುವ ಮಾರ್ಗವ ತೋರಿಸಿದ ಗುರು ಪರಮಾತ್ಮ ಸ್ಮಿತೇಶ್ ಎಸ್ ಬಾರ್ಯ.
ಆಗ 2016ರ ಸಮಯ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಒಂದೆರಡಲ್ಲ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡು, ಬದುಕೇ ಮುಗಿದಂತೆ ತಲೆ ಮೇಲೆ ಕೈಹೊತ್ತು ಕುಳಿತಾಗ, ಮುಂದಡಿಯಿಡಲು ಕಾರಣವಾದ ಒಂದೇ ಒಂದು ಬೆಳಕೆಂದರೆ ಅದು ಟುಟೋರಿಯಲ್. ಸೋತು ನಿರಾಶೆಗೊಂಡು, ಬಹಳ ಅವಮಾನಗೊಂಡು ನಾಚಿಕೆಯ ಮೊಗದಿಂದಲೇ ಐಶ್ವರ್ಯ ಟುಟೋರಿಯಲ್ಗೆ ಹೋದಾಗ, ಅಲ್ಲಿ ನಗುಮುಖದ ಸಮಾಧಾನದ ಮಾತುಗಳು ನಾನು ಜೀವನದಲ್ಲಿ ಸೋತೆ ಇಲ್ಲವೆಂಬ ಭಾವನೆ ಮೊದಲ ಬಾರಿಗೆ ಮೂಡಿಸಿತು. ಇದಾಗಿ ನಂತರ ತರಗತಿಗಳೂ ಆರಂಭವಾಯಿತು. ಮೊದಲನೇ ದಿನ ಯಾರಿಗೂ ಕಾಣದಂತೆ ಒಳಗೆ ಓಡಿದ ನಾವುಗಳು. ಹೊರಬರುವಾಗ ಧೈರ್ಯದಿಂದ ಹೆಜ್ಜೆಯಿಟ್ಟಿದ್ದೆವು. ಅಲ್ಲಿ ನನ್ನಂತೆ ಸೋತ ಸಾವಿರಾರು ಜನಗಳನ್ನು ಒಂದೇ ಸೂರಿನಡಿ ಕೂರಿಸಿ ಸ್ಮಿತೇಶ್ ರವರು ಹೇಳಿದ್ದು ಪುಸ್ತಕದ ಪಾಠವಲ್ಲ,ಬದಲಾಗಿ ಸೋತಾಗ ಎದ್ದು ನಿಲ್ಲುವ ಪಾಠ, ಅಳುವನ್ನು ಮರೆಸಿ ನಗುವ ಪಾಠ, ಆತ್ಮವಿಶ್ವಾಸದ ನಡಿಗೆಯ ಪಾಠ ಒಂದೇ ಮಾತಿನಲ್ಲಿ ಹೇಳುವುದಾದರೆ ಅದು ಜೀವನದ ಪಾಠ..
ನನ್ನದು ಚಿಕ್ಕಂದಿನಿಂದಲೇ ಬರವಣಿಗೆಯ ಹುಚ್ಚು . ಆ ಹುಚ್ಚು ಆಸೆಗಳಿಗೆ ಬಣ್ಣದ ರೆಕ್ಕೆ ಕಟ್ಟಿದವರು ಸ್ಮಿತೇಶ್ ಸರ್. ಒಂದು ದಿನ ಸ್ಪರ್ಧೆಯಲ್ಲಿ ಭಾಗವಹಿಸಲು ಒತ್ತಾಯಿಸಿದ್ದರು, ನನಗಾವ ಯಾವ ನಂಬಿಕೆಯೂ ಇರಲಿಲ್ಲ. ಆದರೆ ಅವರಿಗೆ ನನ್ನ ಮೇಲೆ ಪೂರ್ಣ ಭರವಸೆಯಿತ್ತು. ಅಂದು ನಾನು ಮೊದಲನೇ ಸ್ಥಾನದಲ್ಲಿ ಗೆದ್ದಿದ್ದೆ. ಅದೇ ನನ್ನೊಳಗೆ ಸ್ಪರ್ಧಿಸುವ ಮನೋಭಾವ ಇದೆಯೆಂದು ನನಗರಿವು ಮೂಡಿಸಿದ್ದು..
ಎಲ್ಲಾ ಕನಸುಗಳು ಚಿಗುಲೊಡೆದಿದ್ದು ಅದೇ ಸೋತವರ ಕೋಣೆಯಲ್ಲಿ. ಅಲ್ಲಿ ಎಲ್ಲವನ್ನೂ ಕಲಿತೆವು. ಸರ್ ದಿನಾ ಕರೆದು ನನಗೆ ಅರ್ಧ ಗಂಟೆಯಾದರೂ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತಿದ್ದರು. ಆ ಸಂಧರ್ಭವೇ ಹಾಗಿತ್ತು.. ರೋಗಿ ಅಪ್ಪ, ತುತ್ತು ಅನ್ನಕ್ಕೂ ಪರದಾಡುತಿದ್ದ ಬಡತನದ ಬದುಕು, ಅಮ್ಮನಿಗೂ ಆ ಸಮಯದಲ್ಲಿ ಆರೋಗ್ಯದ ಸಮಸ್ಯೆಯಿತ್ತು. ಪರೀಕ್ಷೆ ವೇಳೆಯಲ್ಲಿ ಕೂಡಾ ಅಮ್ಮನಿಗೆ ಹುಷಾರಿಲ್ಲವೆಂದಾಗ ಪರೀಕ್ಷೆ ನಿಲ್ಲಿಸಿ ಕಳುಹಿಸಿದ್ದರು. ದಿನೇ ದಿನೇ ಈ ಸಮಸ್ಯೆಗಳಿಂದ ಕುಗ್ಗುತಿದ್ದ ನನ್ನ ಬೀಳದಂತೆ ತಡೆದದ್ದು ಆ ಸ್ಪೂರ್ತಿಯ ಮಾತುಗಳು...
ಜಗತ್ತಿನಲ್ಲಿ ಅತೀ ಸಂತೋಷದ ವಿಷಯವೆಂದರೆ ನಮ್ಮ ಮೇಷ್ಟ್ರು ನಮ್ಗೆ ಮಾತ್ರ ಮೇಷ್ಟ್ರಾಗಿ ಉಳಿದಿಲ್ಲ. ಎಲ್ಲರಿಗೂ ಸ್ಪೂರ್ತಿಯ ಮಾತುಗಳನ್ನಾಡಿ ಅವರೆಲ್ಲರ ಬದುಕಿನ ಬೆಳಕಾಗಿದ್ದಾರೆ. ಅವರ ಧ್ವನಿಗೆ ಅಭಿಮಾನಿಗಳಿದ್ದಾರೆ, ಮಾತಿಗೆ ಅಭಿಮಾನಿಗಳಿದ್ದಾರೆ. ಇಷ್ಟಕ್ಕೇ ಸೀಮಿತವಾಗದ ಇವರು ಇತ್ತೀಚಿಗೆ ತಾನೇ ತೆರೆಕಂಡು ಅಧ್ಭುತ ಯಶಸ್ಸು ಕಂಡ "ಕನಸು ಮಾರಟಕ್ಕಿದೆ" ಸಿನೇಮಾದ ನಿರ್ದೇಶಕರು ಕೂಡಾ. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲೇ ಏಕಪಾತ್ರಭಿನಯದಲ್ಲಿ ರಾಜ್ಯಮಟ್ಟದಲ್ಲೂ ಮಿಂಚಿದವರು, ಎಷ್ಟೋ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದವರು, ಭಾಷಣಗಳನ್ನು ಮಾಡಿ ಜನರ ಮನಸ್ಸಿನಲ್ಲಿ ನಿಂತವರು. ಎಷ್ಟೋ ಅಭಿಮಾನಿಗಳಿದ್ದಾರೆ, ಎಷ್ಟೋ ದೊಡ್ಡ ವ್ಯಕ್ತಿಯಾಗಿ ನಿಂತಿದ್ದಾರೆ, ಎಷ್ಟೋ ದೊಡ್ಡ ವ್ಯಕ್ತಿಗಳ ಜೊತೆ ಬೆರೆತಿದ್ದರೂ ಕೂಡಾ ಇಂದಿಗೂ ನಮಗೆಲ್ಲ ಅದೇ ನಗುಮುಖದ ಮೇಷ್ಟ್ರು. ಅವರಲ್ಲಿ ಬೆಳೆದಿದ್ದೇನೆಂಬ ಅಹಂಕಾರವಿಲ್ಲ. ಆ ಮುಖದಲ್ಲಿ ಸೌಜನ್ಯತೆ, ನಗು, ಮುಗ್ಧತೆ ಹಾಗೇ ಇದೆ.
ಅಂತರಂಗ, ದೇಯಿ ಬೈದೆತಿ ಮುಂತಾದ ಕಿರುಚಿತ್ರಗಳ ಪ್ರಯೋಗಗಳ ಬಳಿಕ ಕಂಡ ದೊಡ್ಡ ಕನಸೇ ಈ "ಕನಸು ಮಾರಟಕ್ಕಿದೆ".
ಹೌದು ನೀವೂ ಕನಸನ್ನು ಮಾರಟಕ್ಕಿಟ್ಟ ಆ ಸುಂದರ ಕ್ಷಣಗಳನ್ನು ನೋಡಿದ್ದೀರಾ?? ನೋಡಿಲ್ಲ ಅಂದ್ರೆ ದಯವಿಟ್ಟು ನೋಡಿ. ಅದು ಅಂತಿಂಥ ಕನಸಲ್ಲ, ಒಬ್ಬ ಸಕಲಕಲಾವಲ್ಲಭನ ನಿರ್ದೇಶನದ ಕನಸು. ಅದರಲ್ಲಿ ಎಷ್ಟೋ ಜನರ ಶ್ರಮ, ಬೆವರು, ಕನಸು, ಬದುಕು, ಆಸೆ, ಭರವಸೆ ಇದೆ. ಕರಾವಳಿಗರ ಜೀವನದ ಕನಸದು. ಈ ಕನಸಿಗೆ ನಾವೂ ಜೊತೆಯಾಗಿ, ಅದರ ಭಾಗವಾಗಿ ನನಸಾಗಿಸೋಣ.
ಇನ್ನು ಇವರ ಪ್ರಶಸ್ತಿಗಳ ರಾಶಿಯನ್ನು ಕೆದಕದಿರುವುದೇ ಒಳಿತು. ಪ್ರಶಸ್ತಿ ಅಂದೊಡನೆ ನಾ ಮುಂದು ತಾ ಮುಂದು ಎಂಬಂತೆ ಯಾವುದನ್ನು ಗೀಚುವುದೋ ತಿಳಿಯದು.
ವಲಯ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಇವರ ಸಾಧನೆಯ ಕಿರೀಟಕ್ಕೆ ಪ್ರಶಸ್ತಿಗಳು ಸೇರುತ್ತಲೇ ಹೋಗಿವೆ. ಅವುಗಳನ್ನು ಪದಗಳಲ್ಲಿ ಬರೆಯುದಕ್ಕಿಂತ ಅವರ ಸಿನೇಮಾವನ್ನೇ ನೋಡಿದರೆ ಅವರ ಸಾಧನೆ ಏನೆಂದು ಅರಿವಾಗುವುದು.
ಇಷ್ಟಕ್ಕೂ ಎಂದೋ ಒಮ್ಮೆ ಪ್ರತೀ ವ್ಯಕ್ತಿ ತನ್ನ ಬದುಕನ್ನೊಮ್ಮೆ ತಿರುಗಿ ನೋಡುತ್ತಾನೆ. ಅಲ್ಲಿ ಏಳು, ಬೀಳು, ನೋವು, ನಲಿವು ಮತ್ತು ಇಂತಹ ಸೋಲುಗಳು ಇರುತ್ತವೆ. ಆದರೆ ವಿಶೇಷ ಏನು ಗೊತ್ತಾ?? ಆ ಎಲ್ಲವನ್ನೂ ಮರೆಸಿದ ಇಂತಹ ಒಬ್ಬ ಆದರ್ಶ ಜೀವ, ನಮ್ಮ ಬದುಕಿನ ಅಡಿಪಾಯವನ್ನು ಹಾಕಿ ಕೊಡಲೆಂದೇ ನಮಗೊಂದು ಹೊಸ ಜೀವನವನ್ನು ರೂಪಿಸಲೆಂದೇ ಇರುತ್ತದೆ. ಅಂತಹ ಜೀವ ನನ್ನ ಬದುಕಿನಲ್ಲಿ ಸ್ಮಿತೇಶ್ ಸರ್. ಎಲ್ಲೋ ದಾರಿಯಲ್ಲಿ ಬಿದ್ದಿದ್ದ ಈ ಚಿಕ್ಕ ಕಲ್ಲನ್ನು ತಂದು ರೂಪ ಕೊಟ್ಟ ಆ ಶಿಲ್ಪಿ ನಮ್ ಮೇಷ್ಟ್ರು. ನನ್ನ ಬಾಳಲ್ಲಿ ನಾನೊಬ್ಬ ವ್ಯಕ್ತಿಗೆ ಮನಸಾರೆ ಧನ್ಯವಾದ ಹೇಳಬೇಕೆಂದರೆ, ಅದು ನನ್ನ ತಂದೆ, ತಾಯಿ, ಅಕ್ಕಂದಿರ ಹೊರತಾಗಿ ನಮ್ ಸ್ಮಿತೇಶ್ ಸರ್. ಧನ್ಯವಾದಗಳು ಸರ್ ಈ ಬದುಕಿನಲ್ಲಿ ಒಬ್ಬ ಗುರುವಾಗಿ, ಒಬ್ಬ ಗೆಳೆಯನಾಗಿ, ತಿದ್ದಿ ತೀಡೋ ವ್ಯಕ್ತಿಯಾಗಿ, ಸ್ಪೂರ್ತಿ ತುಂಬಿದ ಜೀವವಾಗಿ ಈ ಜೀವನದಲ್ಲಿ ನೆನಪಾಗಿ ಹೊಸ ದಾರಿಯನ್ನು ಕೊಟ್ಟಿದ್ದಕ್ಕಾಗಿ.

