ಏಳು ವರುಷದ ಬಾಲಕನಿಗಾಗಿ ಮಿಡಿದ ಹೃದಯ . ಗೋಕರ್ಣನಾಥೆಶ್ವರ ನಾಸಿಕ್ ಬ್ಯಾಂಡ್ ಬರ್ಕೆ ಇವರಿಂದ ಜಗತ್ತೇ ಮೆಚ್ಚುವ ಕಾರ್ಯ...
ಕಂದಮ್ಮನ ಉಸಿರಿಗಾಗಿ ಹೋರಾಡಿದ ಸುನೀಲ್ ಕುಲಾಲ್.
ಇದೊಂದು ಈಗಿನ ಮಾತು "ಈ ಯುಗದಲ್ಲೇನಿದ್ರೂ ಕಿತ್ತು ತಿನ್ನೋರೆ, ಹಂಚಿ ತಿನ್ನೋರಿಲ್ಲ" ಅನ್ನೋದು. ಕಾಲ ಬದಲಾಗಿದೆ, ಸ್ವಲ್ಪವಲ್ಲ ಬಹಳ ಬದಲಾಗಿದೆ. ಎಷ್ಟರಮಟ್ಟಿಗೆ ಅಂದರೆ ಮನುಜ ಮನುಜನನ್ನೇ ತಿನ್ನುವ ಮಟ್ಟಿಗೆ. ಇವೆಲ್ಲದರ ನಡುವೆ ಎಲ್ಲೋ ಒಂದೆಡೆ ಒಂದು ಮನಸ್ಸು ಮಾನವೀಯತೆಯಿಂದ ಮಿಡಿದಾಗ ಅದನ್ನು ಮೆಚ್ಚಿಕೊಳ್ಳಬೇಕೆಂದೆನಿಸುತ್ತದೆ. ಮೆಚ್ಚಿ ಹೊಗಳಬೇಕೆಂದೆನಿಸುತ್ತದೆ.
ಇಷ್ಟಕ್ಕೂ ಅದೇಕೆ ಈ ಕಷ್ಟ ಕಾರ್ಪಣ್ಯ ಮನುಜ ಮನೆಗೆ ಬರುವುದು?? ಎಂದು ನೂರು ಬಾರಿ ನಾವೇ ಹೇಳಬಹುದು. ಆದರೆ ಇವೆಲ್ಲಾ ಬರದೇ ಹೋಗಿದ್ದರೆ, ಈ ಮಾನವೀಯ ಮನಗಳೆಂದಾದರೂ ಮಿಡಿಯುತಿತ್ತೇ
ಇದೊಂದು ಬಹಳ ಸುಂದರ ದೃಶ್ಯ. ಮುಂಗಳೂರಿನ ಉರ್ವ ಮಾರಿಯಮ್ಮನ ಜಾತ್ರೆಯ ಸುಸಂಧರ್ಭದಲ್ಲಿ ಏಳು ವರ್ಷದ ಪುಟ್ಟ ಕಂದಮ್ಮನಿಗಾಗಿ ಮಿಡಿದ ಹೃದಯವೊಂದು, ಉರಿಬಿಸಿಲ ಬೇಗೆಯನ್ನೂ ಲೆಕ್ಕಿಸದೇ, ರಾಮನಾಮವನ್ನು ಹಾಡುತ್ತಾ, ದೈತ್ಯಕಾರದ ತನ್ನ ದೇಹವನ್ನು ಎತ್ತಿಕೊಂಡು ಕುಣಿಯುತ್ತಾ, ಉದ್ದವಾದ ಬಾಲದ ಹನುಮಂತ ಎಲ್ಲರನ್ನೂ ಬೆರಗುಗೊಳಿಸಿ, ಇದೀಗ ಎಲ್ಲರ ಹೃದಯದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ.
ಎಲ್ಲೋ ಬೇರೆ ಕಡೆ ಯಾವುದೋ ಕಥೆ ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಆದರೆ ಅದು ನಮ್ಮ ಸುತ್ತಲಲ್ಲೇ ನಡೆದಾಗ ನಿಜವಾಗಿಯೂ ಸಾರ್ಥಕತೆ ತರುತ್ತದೆ. ಇವರು ಸುನೀಲ್ ಕುಲಾಲ್. ಏಳು ವರ್ಷದ ಮಗು ತನೀಶ್ ಗಟ್ಟಿ ಎಂಬ ಮಗು HLH ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತಿದ್ದು, ಇದರ ಚಿಕಿತ್ಸೆಯ ವೆಚ್ಚ ಭರಿಸಲು ಈ ಸುನೀಲ್ ರವರು ಭಜರಂಗಿಯ ಅವತಾರವೆತ್ತಿದ್ದು, ಈ ಮೂಲಕ ಸಂಜೀವಿನಿ ತಂದು ಜೀವವುಳಿಸಲು ಮುಂದಾಗಿದ್ದಾರೆ.
ಈ ವ್ಯಕ್ತಿ ವೇಷ ಧರಿಸುವ ಎರಡು ದಿನಗಳಿಗೆ ಮೊದಲು ಮಾಂಸಾಹಾರ ಸೇವನೆ ಬಿಟ್ಟು, ವೇಷ ತೊಡುವ ದಿನ ದೇವಾಲಯದಲ್ಲಿ ಕಲಾಶಾಭಿಷೇಕ ಮಾಡಿಸಿಕೊಂಡು, ಎರಡು ಚಪಾತಿಯಲ್ಲೇ ಕಳೆದು ನಿಷ್ಠೆಯಿಂದ ಒಂದು ಜೀವದ ಉಸಿರಿಗೆ ಹೋರಾಡಿದ ಜೀವ ಸುನೀಲ್. ಇವರ ಜೊತೆಯಿದ್ದವರು ಗೋಕರ್ಣನಾಥೆಶ್ವರ ನಾಸಿಕ್ ಬ್ಯಾಂಡ್ ಟೀಮ್ ಬರ್ಕೆ. ಇವರೆಲ್ಲರೂ ಬಿಸಿಲನ್ನೂ ಲೆಕ್ಕಿಸದೇ ಮಗುವಿಗಾಗಿ ಈ ಸೇವಾಕಾರ್ಯ ಮಾಡಿದ್ದು ಇದೀಗ ಎಲ್ಲೆಡೆ ಪ್ರಶಂಶೆಗೆ ಪಾತ್ರರಾಗಿದ್ದಾರೆ.
"ಒಳಿತು ಮಾಡು ಮನುಸ, ನೀನೀರುದು ಮೂರು ದಿವಸ" ಇರುವಷ್ಟು ದಿನ ಮತ್ತೊಬ್ಬರ ಬಾಳಿಗೆ ಬೆಳಕಾಗುವುದು, ಅವರ ಮೊಗದಿ ಭರವಸೆಯ ನಗು ತರಿಸುವುದು ಮನುಜನ ಧರ್ಮ. ಸೇವೆ ಉಸಿರಾಗಲಿ.. ಮಾನವೀಯತೆ ಉಳಿಯಲಿ. ಗೋಕರ್ಣನಾಥೆಶ್ವರ ನಾಸಿಕ್ ಬ್ಯಾಂಡ್ ಟೀಮ್ ಬರ್ಕೆ ಮತ್ತು ಸುನೀಲ್ ರವರ ಮೂಲಕ ಇನ್ನಷ್ಟು ಸೇವಾಕಾರ್ಯಗಳು ನಡೆಯಲಿ.

