ಮಾಯಾನಗರಿ ಸಾವಿನ ನಗರಿಯಾಯಿತೆ??? ಯಶು ಬೆಳ್ತಂಗಡಿ SR Kannada.
ಬೆಂಗಳೂರು ಅಂದರೆ ಅದೊಂದು ಮಾಯಾ ಜಗತ್ತು. ಅಲ್ಲಿ ಎಲ್ಲವೂ ಇದೆ, ಎಲ್ಲರೂ ಇದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಬಂದು ಸಂಸಾರ ಕಟ್ಟಿಕೊಂಡವರು ಒಂದೆಡೆ, ಮನೆಯ ಸಮಸ್ಯೆ ನೀಗಿಸಿ ಅವರನ್ನೆಲ್ಲಾ ಸಾಕಿ ಸಲಹಬೇಕೆಂದು ಬಂದವರು ಇನ್ನೊಂದೆಡೆ, ಕ್ರೀಡೆಯಲ್ಲಿ, ಸಾಹಿತ್ಯದಲ್ಲಿ, ಸಿನೇಮಾದಲ್ಲಿ ಏನಾದರೂ ಸಾಧಿಸಬೇಕೆಂದು ಮನೆಯವರನ್ನು ಬಿಟ್ಟು ಬಂದು ಊಟ, ತಿಂಡಿಯಿಲ್ಲದೆ ನಿಲ್ದಾಣಗಳನ್ನು ಅಲೆದವರು ಮತ್ತೊಂದೆಡೆ.
ಬೆಂಗಳೂರು ಅಂದರೆ ಬರಿಯ ನಾಡಲ್ಲ, ಅದೊಂದು ಸಾಮ್ರಾಜ್ಯ. ಅಲ್ಲಿ ಸೋತವನೂ ಇದ್ದಾನೆ, ಗೆದ್ದವನೂ ಇದ್ದಾನೆ, ಪರದಾಡುವವನೂ ಇದ್ದಾನೆ, ಪದವಿಯೇರಿವನೂ ಇದ್ದಾನೆ, ಪದಕ ಗೆದ್ದವನೂ ಇದ್ದಾನೆ, ಪದ ಜೋಡಿಸುವವನೂ ಇದ್ದಾನೆ, ಭಾಷೆ ಬರದವನಿದ್ದಾನೆ, ಭಾಷೆ ಕಲಿತವನಿದ್ದಾನೆ, ಪ್ರೀತಿಸುವನಿದ್ದಾನೆ, ದ್ವೇಷಿಸುವವನಿದ್ದಾನೆ, ಕೋಟಿಗೆ ಬಾಳುವ ಅರಮನೆಯಿದೆ, ಕೂರಲು ಜಾಗವಿಲ್ಲದೆ ಪರದಾಡುವ ಬಡವನೂ ಇದ್ದಾನೆ, ಭಿಕ್ಷೆ ಬೇಡುವವನು, ಭಿಕ್ಷೆ ನೀಡುವವನು, ಒದ್ದು ಹೊರಗೋಡಿಸುವವನೂ ಇದ್ದಾನೆ. ಒಟ್ಟಿನಲ್ಲಿ ಅದೊಂದು ಸರ್ವಧರ್ಮ, ಸರ್ವ ಭಾಷೆ, ಸರ್ವ ಜನಾಂಗಗಳನ್ನು ಒಟ್ಟಾಗಿಸಿ, ಸೌಹಾರ್ದತೆ ಮೂಡಿಸಿದ ಅಪರೂಪದ ಜಾಗ. ಅತೀ ಸುಂದರ ಜಾಗ, ಅತೀ ಪವಿತ್ರ ಜಾಗ...
ಅನ್ನ ಕೊಟ್ಟ, ನೀರು ಕೊಟ್ಟ, ಬದುಕು ಕೊಟ್ಟ ಈ ನಮ್ಮ ಬೆಂಗಳೂರು ಸಾವಿನ ಮನೆಯಾಯಿತೇಕೆ?? ಸರಕಾರದ ನಿರ್ಲಕ್ಷ ಕಾರಣವೇ?? ಇಲ್ಲ ಜನಸಾಮಾನ್ಯನ ನಿರ್ಲಕ್ಷವೇ?? ರೋಗದ ಮೇಲಿನ ಅಸಡ್ಡೆಯೇ ಇಲ್ಲ ಜೀವದ ಮೇಲಿನ ಅಸಡ್ಡೆಯೇ?? ಅನಕ್ಷರಸ್ಥರಲ್ಲ ಎಂದ ಮೇಲೆ ಜಾಗ್ರತೆ ವಹಿಸಬೇಕಿತ್ತು ಅಲ್ಲವೇ?? ಸಾಲುಗಟ್ಟಿ ನಿಂತಿರುವ ಆ ಆಂಬುಲೆನ್ಸ್'ಗಳಲ್ಲಿ ಜೀವನವನ್ನು ಅರ್ಧಕ್ಕೇ ಕೊನೆಗೊಳಿಸಿ ಕನಸು, ಆಸೆಗಳನ್ನು ಬಲಿಕೊಟ್ಟ ಅತೃಪ್ತ ಜೀವಗಳಿವೆ.
ಆದರೆ ನಾವು??
ಇನ್ನೂ ಸುದ್ದಿಗಳನ್ನು ವದಂತಿ ಅನ್ನುತಿದ್ದೇವೆ
ಮನೆಯಲ್ಲಿರಬೇಕು ಅಂದರೆ ಸರ್ಕಾರವೇ ಹೇಳಬೇಕೆಂದು ಕಾಯುತಿದ್ದೇವೆ.
ಸಭೆ ಸಮಾರಂಭ ಎಂದು ಸೇರುತಿದ್ದೇವೆ.
ಜೀವದ ಆಸೆಯಿಲ್ಲದೆ ಓಡಾಡುತಿದ್ದೇವೆ.
ಮನೆಯಲ್ಲಿದ್ದರೆ ಜೀವ ಉಳೀದೀತು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ, ಸರ್ಕಾರ ಹಣ ನೀಡುವುದೇ ಎಂದು ಕೇಳುತಿದ್ದೇವೆ.
ಯಾರ ಜೀವವೂ ಸಾಮಾನ್ಯ ಪ್ರಶ್ನೆಯಲ್ಲ,
ಉಸಿರು ಅಮೂಲ್ಯ ಸಂಪತ್ತು,
ಅದನ್ನು ಉಳಿಸಿಕೊಳ್ಳೋಣ.
ಬದುಕಿ ಬಾಳೋಣ.
ಎಲ್ಲರಿಗೂ ಶುಭವಾಗಲಿ,
ಭಗವಂತ ನಮ್ಮೆಲ್ಲರ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ...

