ಗಂಡು ಹೆಣ್ಣೆಂಬ ಕಾದಾಟದಲ್ಲಿ ಬಲಿಪಶುವಾದರೆ ಮುಗ್ಧ ಮನಸ್ಕರು?? ಯಶು ಬೆಳ್ತಂಗಡಿ: SR Kannada.
ಅದೊಂದು ಕಾಲವಿತ್ತು ಗಂಡಿಲ್ಲದ ಮನೆ ಜೀವಂತಿಕೆಯಿಲ್ಲದ ಮನೆಯಂತೆ. ಮನೆಗೊಬ್ಬ ಮಗ ಬೇಕೆ ಬೇಕೆಂಬುದು ಅವರ ಮನದಾಳದ ಮಾತಾಗಿತ್ತು. ಗಂಡಿಲ್ಲದ ಮನೆಯನ್ನು ವಿಕೃತಿಗಾಗಿ ಬಳಸಿಕೊಳ್ಳುವ, ಅವರನ್ನು ವಿಚಿತ್ರವಾಗಿ ಕಾಣುವ ಜೀವನವೂ ಇತ್ತು. ಮನೆಯಲ್ಲಿ ಗಂಡಿಲ್ಲದಿದ್ದರೆ ಯಾರ ಭಯವೂ ಇರುವುದಿಲ್ಲವೆಂಬ ನಂಬಿಕೆಯು ಇತ್ತೂ. ಗಂಡೆಂದರೆ ಪ್ರತೀ ಹೆಣ್ಣಿನ ಧೈರ್ಯವಾಗಿ, ಅವಳ ಜೀವನದ ಭಾಗವಾಗಿದ್ದ.. ಅವಳ ಎಲ್ಲಾ ಭಾವನೆಗಳನ್ನು ಹಂಚಿಕೊಂಡು ಸಂತಸದ ದಿನಗಳನ್ನು ಆಕೆಗೆ ಜೀವನವಿಡೀ ಹಂಚಿ ಅವಳ ಜೀವನವನ್ನು ಸಿಹಿಯನ್ನಾಗಿಸಿದ್ದ.
ಆದರೆ ಕಾಲ ಬದಲಾದಂತೆ ಜನರ ಮನ ಬದಲಾಗಿ ಹೆಣ್ಣೂ ಗಂಡಿಗೆ ಸರಿಸಮಾನಳಾಗಿ ನಿಲ್ಲುವಳೆಂಬ ಭಾವನೆ ಬಂತು. ಅವಳಿಗೆ ಎಲ್ಲವನ್ನೂ ಎದುರಿಸುವ ಸಾಮಾರ್ಥ್ಯ ಕಲಿಸಿಕೊಟ್ಟರು. ವಿದ್ಯೆ, ಬುದ್ಧಿ, ಸಾಧನೆ ಎಲ್ಲದಕ್ಕೂ ಜೊತೆಯಾಗಿ ಅವಳನ್ನು ಸಮಾಜದ ಮುಂದೆ ತರಲಾಯಿತು. ಅವಳಿಗೆ ಬೆನ್ನುಲುಬಾಗಿ ಪ್ರತೀ ಅಣ್ಣ, ತಂದೆ, ತಮ್ಮಂದಿರು ನಿಂತು ಅವಳನ್ನು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ತಾವೂ ಜೊತೆಯಾದರು. ಅವಳಿಗೆ ಕೊಟ್ಟ ಈ ಗೌರವ, ಪ್ರೋತ್ಸಾಹದ ಪ್ರತೀಕವಾಗಿ, ಸಾಧಕರ ಜೊತೆಯಲ್ಲಿ ಹೆಣ್ಣು ಪೈಪೋಟಿ ಕೊಟ್ಟು ನಿಂತಳು..
ಇಂದು ನಾವೆಲ್ಲ ಕಂಪ್ಯೂಟರ್ ಅಥವಾ ಕಲಿಯುಗದಲ್ಲಿದ್ದೇವೆ. ಪುರಾಣಗಳ ಪ್ರಕಾರ ಈ ಕಲಿಯುಗದಲ್ಲಿ ಜಗತ್ತು ನೂರಕ್ಕೆ ನೂರು ಸುಳ್ಳುಗಳಿಂದ ತುಂಬಿರುತ್ತವೆಯಂತೆ. ಇದು ನಿಜವೆಂದು ಸಾಬೀತು ಪಡಿಸಲು ನಮ್ಮ ಸುತ್ತಮುತ್ತ ಸಾವಿರಾರು ಘಟನೆಗಳು ನಡೆಯುತ್ತಾ ಬಂದಿದೆ. ಒಂದು ಕಾಲದಲ್ಲಿ ನಿರಂತರ ಶೋಷಣೆಗೆ ಒಳಗಾದ ಹುಡುಗಿಯರಿಗಾಗಿ ಅದನ್ನು ಸರಿಪಡಿಸಲು ಕೆಲವೊಂದು ಮಹಿಳಾ ಸಂಘಟನೆ, ಮಹಿಳಾ ಕಾಯ್ದೆ, ಮಹಿಳಾ ಪರ ಕಾನೂನುಗಳು ರಚನೆಯಾದವು.
ಇವೆಲ್ಲ ಕಾಯ್ದೆ, ಕಾನೂನು, ಸಂಘಟನೆಗಳಿಂದ ಏನು ಬದಲಾವಣೆಯಾಯ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅನ್ಯಾಯಕ್ಕೆ ಒಳಗಾಗುವ ಕೆಲ ಮಧ್ಯಮ ವರ್ಗ , ಕೆಳವರ್ಗ ಹಾಗೆಯೇ ಇದೆ. ಆದರೆ ಕೆಲವು ಶ್ರೀಮಂತರು, ಅಹಂಕಾರಿಗಳು ಇಂತಹ ಕಾನೂನಿನ ದುರುಪಯೋಗ ಮಾಡಿಕೊಂಡು, ಬಡವರ, ಅಮಾಯಕರ ಹೊಟ್ಟೆ ಮೇಲೆ ಹೊಡೆಯುತ್ತಾ ತಾವು ಏನೋ ಸಾಧಿಸಿದವರಂತೆ ಬೀಗುತಿದ್ದಾರೆ.
ಕಾನೂನು ಹೋರಾಟಗಾರರೇ, ಸಂಘಟನಕಾರರೇ, ಪ್ರತೀ ಬಾರಿ ಹೆಣ್ಣೇ ಶೋಷಣೆಗೆ ಒಳಗಾಗುವುದಿಲ್ಲ, ಪ್ರತೀಬಾರಿ ಗಂಡಿನಿಂದಲೇ ತಪ್ಪು ನಡೆದಿರುವುದಿಲ್ಲ. ಪ್ರತೀಬಾರಿ ಹೆಣ್ಣೇ ಶೋಷಿತಳೂ ಅಲ್ಲ, ಪ್ರತೀಬಾರಿ ನೋವು ಹೆಣ್ಣಿಗೇ ಆಗಿರುವುದಿಲ್ಲ, ಪ್ರತೀಬಾರಿ ಮೋಸ, ವಂಚನೆ ಅವಳಿಗೇ ಆಗಿರುವುದಿಲ್ಲ, ನಾಣ್ಯಗಳಿಗೆ ಎರಡು ಮುಖ, ಹಾಗೇ ಪ್ರತೀ ಒಂದಕ್ಕೂ ಎರಡು ಮುಖಗಳಂತೆ, ಈ ನ್ಯಾಯ, ಅನ್ಯಾಯದ ಹೋರಾಟದ ಮಧ್ಯೆ, ನ್ಯಾಯವೇ ಸಿಗದೇ ಬಲಿಪಶುಗಳಾಗಿ ಪರದಾಡಿದ ಕೆಲವು ಮನಗಳಿಗೆ ನ್ಯಾಯ ಕೊಡಿಸಲು ಇಂದು ಯಾರಿದ್ದಾರೆ???
ಮಹಿಳಾ ಸಂಘಟನೆ, ಮಹಿಳಾ ಕಾಯ್ದೆ, ಮಹಿಳಾ ಮೀಸಲಾತಿ ಎಲ್ಲವೂ ಸರಿ. ಆದರೆ ಇವುಗಳು ನ್ಯಾಯವನ್ನೇ ಬದಲಿಸಿ, ಅನ್ಯಾಯಕ್ಕೆ ಒಳಗಾದವರಿಗೇ ಮತ್ತೆ ಅನ್ಯಾಯ ಮಾಡಿ ನೋವು ಕೊಡುವುದಾದರೆ ಇಂತಹ ಮೀಸಲಾತಿಗಳ ಅಗತ್ಯ ಇದೆಯೇ?? ಇಂತಹ ಮೀಸಲಾತಿಗಳಿಂದ ನಾಳೆ ನಮ್ಮ ಅಣ್ಣ-ತಮ್ಮಂದಿರಿಗೂ ಅನ್ಯಾಯ ಆಗಬಹುದಲ್ಲವೇ???
ಇವುಗಳಿಂದ ಎಷ್ಟು ಅನ್ಯಾಯ ಒಳಗಾದವರಿಗೆ ನ್ಯಾಯ ಸಿಕ್ಕಿದೆ?? ಎಷ್ಟೇ ಕಾನೂನು ಕಾಯ್ದೆ ಬಂದರೂ, ಬಡವರ ಮನೆಯ ಮಕ್ಕಳು ಇಂದಿಗೂ ಶೋಷಣೆಗೆ ಒಳಗಾಗಿ, ಅನ್ಯಾಯಕ್ಕೆ ಒಳಗಾಗಿ, ನ್ಯಾಯ ಸಿಗದೇ ಸಾಯುತಿದ್ದಾರೆ ಅಂದ ಮೇಲೆ ಯಾರಿಗಾಗಿ ಈ ಕಾನೂನುಗಳು??
ನನ್ನ ಆಶಯವಿಷ್ಟೇ,
ಈ ಮೀಸಲಾತಿ, ಸಮಾನತೆಯ ಹೋರಾಟದಲ್ಲಿ ಮುಗ್ಧ ಜೀವಗಳಿಗೆ ಅನ್ಯಾಯ ಆಗದಿರಲಿ. ಗಂಡು ಕೂಡಾ ತಪ್ಪಿಲ್ಲದೆ ಶೋಷಣೆಗೆ ಒಳಗಾಗುತ್ತಾನೆ, ಅವನಿಗೂ ನ್ಯಾಯ ಸಿಗಲಿ. ಹೆಣ್ಣು ಕೂಡಾ ಮಿತಿಮೀರಿ ವರ್ತಿಸುತ್ತಾಳೆ ಅವಳಿಗೂ ಶಿಕ್ಷೆ ಆಗಲಿ. ಸಮಾನತೆಗಾಗಿ ಹೋರಾಟ ಸಾಕು ಈಗ ಸಮಾನತೆ ಸಿಕ್ಕಿದ ಮೇಲೆ ನ್ಯಾಯದ ವಿಷಯದಲ್ಲೂ ಸಮಾನತೆಯ ಹೋರಾಟವೊಂದು ನಡೆಯಲಿ, ನಮ್ಮ ಮನೆಯ ಗಂಡು ಮಕ್ಕಳಿಗೆ ಅನ್ಯಾಯ ಆಗುವ ಮೊದಲು ನಾವು ಎಚ್ಚೆತ್ತುಕೊಂಡು, ಮುಗ್ಧ ಜೀವಗಳ ಪ್ರತೀ ತಪ್ಪಿಲ್ಲದ ನಡೆಗೆ ಜೊತೆನಿಲ್ಲೋಣ. ಬದಲಾವಣೆ ಯಾವುದೋ ಭಾಷಣದಿಂದ, ಯಾವುದೋ ಚಲನಚಿತ್ರದಿಂದ ಆಗುವುದಲ್ಲ, ನಮ್ಮ ಮನದಾಳದಿಂದ ಬರಬೇಕು.. ಅದಕ್ಕಾಗಿ ನಾವು ಸ್ವಲ್ಪ ಆಲೋಚನೆ ಮಾಡಿ ಇಂದೇ ನಮ್ಮ ನಿಲುವನ್ನು ಬದಲಿಸಿಕೊಳ್ಳೋಣ. *ಗಂಡು ಹೆಣ್ಣೆಂಬ ಕಾದಾಟದಲ್ಲಿ ಮುಗ್ಧ ಮನಸ್ಕರು ಬಲಿಪಶು ಆಗದಿರಲಿ.*
ಯಶು ಬೆಳ್ತಂಗಡಿ.

