ಬದುಕಲೇಬೇಕು ಅನ್ನುವ ಒಂದು ಅನಿವಾರ್ಯತೇ ಬದುಕನ್ನೇ ಬದಲಾಯಿಸಬಹುದು: ಯಶು ಬೆಳ್ತಂಗಡಿ SRKannada.
ಬದುಕಲೇಬೇಕು ಅನ್ನುವ ಒಂದು ಅನಿವಾರ್ಯತೇ ಬದುಕನ್ನೇ ಬದಲಾಯಿಸಬಹುದು: ಯಶು ಬೆಳ್ತಂಗಡಿ.
ಜೀವನ ತುಂಬಾ ವಿಶಾಲವಾದದ್ದು,
ಇಲ್ಲಿ ದಿನಾ ಸಾವು, ಹುಟ್ಟು ನೋಡುತ್ತಲೇ ನಗು, ಅಳುವಿನಿಂದ ಸಾಗುತ್ತೇವೆ.
ಆದರೆ ಇದನ್ನು ಹೊರತುಪಡಿಸಿ ಕೆಲವೊಂದು ಜೀವನವಿದೆ ಅದು ಹುಟ್ಟಿನ ನಂತರ ಸಾವಿನ ದವಡೆಯ ಜೀವನ.
ಅಲ್ಲಿ ನೂರು ನೋವು, ಅಳಲು,ಆಕ್ರೋಶ, ಆಕ್ರಂದನ ಎಲ್ಲವೂ ಇದೆ ಆದರೆ ನೆಮ್ಮದಿ ಒಂದನ್ನು ಬಿಟ್ಟು.
ಹಾಗೇ ನೋಡಿದರೆ ನಾನು ಇದಕ್ಕೆ ಹೊರತಾಗಿಲ್ಲ,
ನನ್ನದು ಇಂದು ನೆನ್ನೆಯ ಅಳಲಲ್ಲ,
ಎಂದಿನದೋ ಅದರ ಆರಂಭ ನನಗೂ ತಿಳಿದಿಲ್ಲ.
ಎಂದೋ ಒಮ್ಮೆ ಸ್ನೇಹಿತರೆಂಬ ಸಲುಗೆಯಲ್ಲಿ ಮಾತಾನಾಡಿದಾಗ,
ಅದನ್ನೇ ಬಳಸಿಕೊಂಡು ಅಪಾರ್ಥಗೈದು, ಹೀನಾಯ ರೀತಿಯಲ್ಲಿ ಕಂಡು ಹೇಳಿದ ಒಂದು ಮಾತು ಇಂದು ನನ್ನ ಜೀವನದಲ್ಲಿ ಇಲ್ಲಿಗೆ ತಲುಪಿಸಿದೆ ಎಂದರೂ ತಪ್ಪಿಲ್ಲ.
ಆಗಿನ್ನೂ ಹದಿಹರೆಯ ಆದರೆ ಕೊನೇ ಘಟ್ಟ,
ಎಲ್ಲರೂ ಓದುವ ವಯಸ್ಸಿನಲ್ಲಿ ನಾನಂತೂ ಊರು ಬಿಟ್ಟು ಹೊರಟು ನಿಂತವಳು.
ಹೊಸ ಜನ, ಹೊಸ ಜಾಗ, ಹೊಸ ಬದುಕು ಏನೆಂದು ಅರ್ಥವಾಗದಿದ್ದರೂ,
ನಾ ಅರ್ಥೈಸಿಕೊಂಡವಳಂತೆ ನಟಿಸಬೇಕಿತ್ತು
ಆದರೂ ಅದೇನೆಂದೂ ಅರ್ಥವಾಗಲೇ ಇಲ್ಲ.
ಎಲ್ಲವೂ ಹೊಸದಿರುವಾಗ ಯಾರೊಬ್ಬರು ಆತ್ಮಿಯರಂತೆ ನಟಿಸಿದರೂ ನಂಬಿಬಿಡುವಂತ ವಯಸ್ಸದು.
ನನದೂ ಅದೇ ಹಳಿಯ ಪ್ರಯಾಣ.
ಸಾಗುತಿದ್ದ ಹಾಗೇ ನಿಧಾನಕ್ಕೆ ಎಲ್ಲವೂ ಅರ್ಥೈಸಿಕೊಳ್ಳಲೇಬೇಕಿತ್ತು.
ಅರ್ಥವಾದಷ್ಟು ಅರ್ಥೈಸಿಕೊಳ್ಳತೊಡಗಿದೆ.
ಸಾಗುವ ದಾರಿಯಲ್ಲಿ ಕಂಡ ಅವಮಾನ, ಅಪಮಾನಗಳು ಜೋಳಿಗೆಯಲ್ಲಿ ಹಾಕಿ ಸಾಗತೊಡಗಿದೆ,
ಏಕೆಂದರೆ ನಾನು ಬದುಕಲೇಬೇಕೆಂಬ ಅನಿವಾರ್ಯತೆ ಇತ್ತು.
ಸಾವನ್ನು ಆಯ್ಕೆ ಮಾಡುವ ಮೂರ್ಖಳಾದರೂ ಅಷ್ಟು ಧೈರ್ಯವಂತೆ ಅಂತೂ ಆಗಿರಲಿಲ್ಲ.
ಬದುಕು ಸೃಷ್ಟಿಸಿದ ಈ ಸುಳಿಯಲ್ಲಿ ಸಿಲುಕ ಕೋಟಿ ಜೀವಗಳಲ್ಲಿ,
ನಾನೂ ಒಬ್ಬಳಾಗಿದ್ದೆ. .
ಹೋರಾಡಲೇಬೇಕಿತ್ತು,
ಬಿದ್ದರೂ ಏಳಲೇಬೇಕಿತ್ತು,
ಎದ್ದು ನಡೆಯಬೇಕಿತ್ತು,
ಮೊದಮೊದಲಿಗೆ ಕಷ್ಟವಾಯಿತು ಆದರೂ ನಿಲ್ಲತೊಡಗಿದೆ,
ನಿಧಾನಕ್ಕೆ ಹೆಜ್ಜೆಯಿಕ್ಕತೊಡಗಿದೆ,
ಸಾವಿರ ಬಾರಿ ಬಿದ್ದೆ ಮತ್ತು ಇಂದಿಗೂ ಬೀಳುತ್ತಲೇ ಇದ್ದೇನೆ,
ಸಾವಿರ ಬಾರಿ ಅತ್ತಿದ್ದೇನೆ ಮತ್ತು ಅಳುತ್ತಲೇ ಇದ್ದೇನೆ.
ಇವೆಲ್ಲವನ್ನು ದಾಟಿ ಒಂದೊಂದೇ ಹೆಜ್ಜೆ ಇಡುತಿದ್ದೇನೆ.
ಎಂದಾದರೊಮ್ಮೆ ಗುರಿ ತಲುಪೇ ತಲುಪುತ್ತೇನೆ.
ಸಮಯ ತೆಗೆದುಕೊಳ್ಳಬಹುದು,
ನಾ ಸೋತು ಹೋಗಬಹುದು ಆದರೆ,
ಸಾಯುವವಳಲ್ಲ..
ಬದುಕು ಸೃಷ್ಟಿಸಿದ ಈ ಅನಿವಾರ್ಯತೆಯಿಂದ ಬದುಕಲೇಬೇಕೆಂದು ನಿರ್ಧಾರ ಮಾಡಿದ್ದೇನೆ.
ಮತ್ತೆ ನೀವೂ ಸಾವಿರ ಅಡೆತಡೆಗಳು ಬರಲಿ,
ನೂರು ನೋವುಗಳೇ ಇರಲಿ,
ಸಮಯ ತೆಗೆದುಕೊಳ್ಳಲಿ,
ನೂರು ಬಾರಿ ಸೋಲಲಿ,
ಆದರೆ ಹೋಗಬೇಕಾಗಿರುವ ದಾರಿ,
ಸೇರಬೇಕಾಗಿರುವ ಗುರಿ ಮರೆಯದಿರಲಿ.
ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಸಮಸ್ಯೆಗಳನ್ನು, ಕಾಮಗಾರಿಗಳನ್ನು, ಕಾರ್ಯಕ್ರಮಗಳ ಮಾಹಿತಿಯನ್ನು ನಮ್ಮ ವಾಟ್ಸಾಪ್ ನಂಬರಿಗೆ ಫೋಟೋ ಸಮೇತ ಕಳುಹಿಸಿಕೊಟ್ಟಲ್ಲಿ, ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು. ನಿಮ್ಮ ಊರಿನ ಯಾವುದೇ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214

